About Temple

Home About

design

ಕ್ಷೇತ್ರ ಪರಿಚಯ

history ತ್ರೇತಾಯುಗದಲ್ಲಿ ಶ್ರೀ ಶರಭಂಗ ಮಹರ್ಷಿಯಿಂದ ಪ್ರತಿಷ್ಠೆಗೊಂಡು ಅವರ ಪಾವನ ಕರಗಳಿಂದ ಪೂಜಿಸಿದ ಲಿಂಗರೂಪಿ ಶ್ರೀ ಶರಭೇಶ್ವರ ದೇವರು ಎಂದು ಪುರಾಣಗಳು ಇಲ್ಲಿಯ ಮಹಿಮೆಯನ್ನು ಸಾರುತ್ತವೆ. ಶ್ರೀ ಕ್ಷೇತ್ರ ನೇತ್ರಾವತಿ ನದಿ ಕಿನಾರೆಯಲ್ಲಿದ್ದು, ಶಿವನು ಭುಜಂಗಾಭರಣ ಲಿಂಗರೂಪಿಯಾಗಿ ಸರ್ಪಗಳಿಂದ ತುಂಬಿದ್ದ ಕಾಡಿನ (ಹಾಡಿನ) ಮಧ್ಯದಲ್ಲಿ ಕಂಗೊಳಿಸಿದ್ದರಿಂದ ಸರ್ಪನ+ಹಾಡಿ = ಸರ್ಪಪಾಡಿ ಅದೇ ಮುಂದಕ್ಕೆ ಸರಪಾಡಿ ಎಂಬ ನಾಮಾಭಿದಾನಕ್ಕೆ ಕಾರಣವಾಯಿತು. ಸುಮಾರು 17ನೇ ಶತಮಾನದಲ್ಲಿ ಜೀರ್ಣೋದ್ಧಾರಗೊಂಡಿದೆ ಎಂದು ಇಲ್ಲಿದ್ದ ಶಿಲಾಶಾಸನದಲ್ಲಿ ಉಲ್ಲೇಖ ಇತ್ತು. ಸುಮಾರು 1700-1757ರ ಮಧ್ಯದಲ್ಲಿ ಅಖಂಡ ಹಿಂದೂ ಸಾಮ್ರಾಜ್ಯವಾದ ವಿಜಯನಗರ ಅರಸರ ಆಳ್ವಿಕೆ ದುರ್ಬಲಗೊಂಡಾಗ ಅವರ ಸಾಮಂತ ರಾಜರಾದ ಕೆಳದಿಯ ಸಂಸ್ಥಾನಕ್ಕೂ ಮಡಿಕೇರಿಯ ಅರಸರಿಗೂ ವೈವಾಹಿಕ ಸಂಬಂಧ ಏರ್ಪಟ್ಟಿದ್ದರಿಂದ ಅವರೊಳಗೆ ಪರಸ್ಪರ ರಾಜತಾಂತ್ರಿಕ ವ್ಯವಹಾರ ನಡೆಯುತ್ತಿತ್ತು. ಕೆಳದಿ ಸಂಸ್ಥಾನದಲ್ಲಿ ಆಡಳಿತಗಾರರಾಗಿದ್ದ ಕುಂದಾಪುರದ ಹಲ್ಸನಾಡಿನ ಮಾದಪ್ಪಯ್ಯ ಕಾರಂತರು ರಾಜಕಾರ್ಯ ನಿಮಿತ್ತ ಕುದುರೆಯ ಮೇಲೆ ಕೆಳದಿಯಿಂದ ಮಡಿಕೇರಿಗೆ ಸಂಚಾರ ಮಾಡುತ್ತಿದ್ದಾಗ ಸರಪಾಡಿಯ ಹತ್ತಿರ ನದಿ ಕಿನಾರೆಯಲ್ಲಿ ಸಂಜೆಯಾದುದರಿಂದ ತಂಗಿದರು. ರಾತ್ರಿಯ ವೇಳೆ ಕಾರಂತರಿಗೆ ಕನಸಿನಲ್ಲಿ ಪರಮೇಶ್ವರ ದೇವರು ಗೋಚರಿಸಿ ನಾನಿಲ್ಲಿ ನೆಲೆನಿಂತಿದ್ದೇನೆ, ನನಗೆ ದೇಗುಲ ನಿರ್ಮಿಸಿ ನನ್ನನ್ನು ಪೂಜಿಸಿ ನಿಮ್ಮ ಸಾಮ್ರಾಜ್ಯಕ್ಕೆ ಕ್ಷೇಮವುಂಟಾಗುತ್ತದೆ ಎಂದು ಅಭಯವಾಯಿತು. ಮರುದಿನ ಬೆಳಿಗ್ಗೆ ಶಿವ ಸಾನಿಧ್ಯವನ್ನು ಹುಡುಕಲು ಪ್ರಾರಂಭಿಸಿದರು. ದಟ್ಟವಾದ ಕಾಡಿನ ಮಧ್ಯದಲ್ಲಿ ಬೃಹತ್ ವೃಕ್ಷದ ಕೆಳಗೆ ಹಸುವೊಂದು ನಿಂತಿದ್ದು ಅದರ ಕೆಚ್ಚಲಿನಿಂದ ತನ್ನಿಂದ ತಾನೇ ಹಾಲು ಸುರಿಯುತ್ತಿತ್ತು. ಇದನ್ನು ಗಮನಿಸಿದ ಕಾರಂತರು ಸುತ್ತಮುತ್ತಲಿನ ಪೊದೆಗಳನ್ನು ಸರಿಸಿ ನೋಡಿದಾಗ ಶಿವಲಿಂಗ ದರ್ಶನವಾಯಿತು. ರಾತ್ರಿ ಕಂಡ ಕನಸು ನನಸಾದುದರಿಂದ ದೇವರನ್ನು ಪ್ರತ್ಯಕ್ಷೀಕರಿಸಿಕೊಂಡ ಕಾರಂತರು ಇಕ್ಕೇರಿ ಸಂಸ್ಥಾನಕ್ಕೆ ಅರಿಕೆಯನ್ನು ಮಾಡಿ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಿಸಿದರು ಎಂದು ಇತಿಹಾಸ ಹೇಳುತ್ತದೆ. ದೇವಾಲಯದ ಪೂಜಾಕೈಂಕರ್ಯ ಅನೂಚಾನವಾಗಿ ನಡೆಯಲು ಅಗ್ರಹಾರ, ಗುತ್ತುಗಳ ಮನೆ, ಒಕ್ಕಲುಗಳ ಲೆಕ್ಕಾಚಾರ ಮಾಡಲು ವ್ಯವಸ್ಥೆ ಮಾಡಿಸಿದರು. ಪೂಜಾಕಾರ್ಯಕ್ಕೆ ಕುಂದಾಪುರದ ಉಪ್ಪಿನಕುದ್ರುವಿನಿಂದ 12 ಬ್ರಾಹ್ಮಣ ಕುಟುಂಬದವರನ್ನು ಕರೆತರಿಸಿ ಅವರಿಗೆ ಮನೆಗಳನ್ನು ಕಟ್ಟಿಕೊಟ್ಟು ಸೋಮಪುರ ಎಂಬ ಅಗ್ರಹಾರ ನಿರ್ಮಾಣವಾಯ್ತು. ಅಗ್ರಹಾರದಲ್ಲಿ ಆಂಜನೇಯ ದೇವರು ಮತ್ತು ಆತನೆದುರು ದಕ್ಷಿಣಾಭಿಮುಖಿಯಾದ ಶ್ರೀ ವೆಂಕಟರಮಣ ದೇವರ ಪ್ರತಿಷ್ಠೆ ಮಾಡಲಾಯಿತು. ಭೂತಗಣಾಧಿಪತಿಯಾದ ರುದ್ರನೇ ಇಲ್ಲಿ ನೆಲೆನಿಂತ ಮೇಲೆ ಅವನ ಗಣಗಳು ಇಲ್ಲಿ ನೆಲೆ ನಿಲ್ಲುವುದು ಸಹಜ. ಶಿವಗಣ ಹಾಗೂ ದೇವರ ಅರ್ಧಾಂಗಿಯಾದ ಶಿವೆ ಮತ್ತು ಅವಳ ಶಕ್ತಿ ಗಣಗಳು ದೇವಸ್ಥಾನದ ಒಳಗೂ ಹೊರಗೂ ನೆಲೆ ನಿಂತಿವೆ. ದೇವಾಲಯದ ಪೂರ್ವ ದಿಕ್ಕಿನಲ್ಲಿ ನಾಗಸಾನಿಧ್ಯ, ಉತ್ತರ ದಿಕ್ಕಿನಲ್ಲಿ ರಕ್ತೇಶ್ವರಿ(ಶಾಂತಿಗುಡ್ಡೆ) ಆಗ್ನೇಯದಲ್ಲಿ ಅಜಿಲಮೊಗರಿನ ಪಂಜುರ್ಲಿ ದೈವ, ದಕ್ಷಿಣಭಾಗದಲ್ಲಿ ಪಶ್ಚಿಮಾಭಿಮುಖಿ ನೇತ್ರಾವತಿ ನದಿ, ವಾಯವ್ಯ ದಿಕ್ಕಿನಲ್ಲಿ ರಕ್ಷಕಳಾಗಿ ಕಾರಣಿಕದ ಕೋಡಿ ಕಲ್ಲುರ್ಟಿ ದೈವ, ಒಟ್ಟಿನಲ್ಲಿ ಇದೊಂದು ದೈವ-ದೇವರು ನಡೆದಾಡುವ ಪರಮ ಪಾವನ ಕ್ಷೇತ್ರವಾಯ್ತು. ಕಾಲಕ್ರಮೇಣ ಆಡಳಿತ ನಡೆಸುತ್ತಿದ್ದ ಹಲ್ಸನಾಡು ಕಾರಂತರು ಜಾತ್ರಾ ಉತ್ಸವಾದಿಗಳನ್ನು ನಡೆಸದೇ ಇದ್ದಾಗ ಹಲ್ಸನಾಡು ಮನೆಗೆ ಕೋಡಿ ಕಲ್ಲುರ್ಟಿ ದೈವ ಬೆಂಕಿ ಇಟ್ಟು ಮನೆಯ ತೊಟ್ಟಿಲಲ್ಲಿ ಮಲಗಿದ ಎಳೆ ಶಿಶುವನ್ನು ತೊಟ್ಟಿಲ ಸಹಿತ ರಣಬಿಸಿಲಿನಲ್ಲಿಟ್ಟು ಕಾರಂತ ಮನೆತನದವರಿಗೆ ಬಿಸಿ ಮುಟ್ಟಿಸಿ, ಜಾತ್ರೆ ಪ್ರಾರಂಭಿಸುವಂತೆ ಮಾಡಿದ ಕೀರ್ತಿ ಕಲ್ಲುರ್ಟಿ ದೈವಕ್ಕೆ ಸಲ್ಲುತ್ತಿದ್ದು, ಭಕ್ತರಾಭೀಷ್ಟಪ್ರದಾಯಕಿಯಾಗಿ ರಕ್ಷಣೆ ಮಾಡುತ್ತಿದ್ದಾಳೆ. ಶರಭೇಶ್ವರ ದೇವರ ಐದು ದಿನದ ಜಾತ್ರೆಯಲ್ಲಿ ವಿಶಾಲವಾದ ರಥಬೀದಿಯಲ್ಲಿ ದೈವಗಳನ್ನು ಎದುರು ಇಟ್ಟುಕೊಂಡು ಪಲ್ಲಕ್ಕಿ, ಚಂದ್ರ ಮಂಡಲ, ಬ್ರಹ್ಮರಥದಲ್ಲಿ ಬರುವ ದೃಶ್ಯವೇ ಕಣ್ಣಿಗೊಂದು ಹಬ್ಬ. ಈ ಮೇಲಿನ ಎಲ್ಲಾ ಅಂಶಗಳಿಂದ ಸದಾಶಿವನು ಶ್ರೀ ಶರಭೇಶ್ವರನ ರೂಪದಲ್ಲಿ ನೇತ್ರಾವತಿ ತಟದಲ್ಲಿ ಸೋಮಪುರವೆಂಬ ಅಗ್ರಹಾರದಲ್ಲಿ ಕಂಗೊಳಿಸುತ್ತಿರುವುದು ನಮ್ಮ ಪುಣ್ಯವೇ ಕಾಲಕ್ರಮೇಣ ಭೂ ಸುಧಾರಣಾ ಕಾಯ್ದೆಯಿಂದ ದೇವಸ್ಥಾನದ ಆದಾಯಕ್ಕೆ ಕೊರತೆಯಾಯಿತು, ವ್ಯವಸ್ಥೆ ಶಿಥಿಲಗೊಂಡಿತು. ಈ ಸಂದರ್ಭ ಭಕ್ತಾದಿಗಳು ಒಟ್ಟು ಸೇರಿ ತಾತ್ಕಾಲಿಕ ಸಮಿತಿ ರಚಿಸಿಕೊಂಡು ದೇವಾಲಯದ ಪೂಜೆ, ಜಾತ್ರಾದಿಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬಂದರೂ ದೇವಸ್ಥಾನ ಜೀರ್ಣಗೊಂಡ ಕಾರಣ ಮತ್ತೆ ಕ್ಷೇತ್ರವನ್ನು ಜೀರ್ಣೋದ್ದಾರಗೊಳಿಸುವ ಸತ್ ಸಂಕಲ್ಪ ಕೈಗೊಳ್ಳಲಾಯಿತು. ಶರಭೇಶ್ವರ ದೇವರಿಗೊಂದು ಭವ್ಯ ದೇವಾಲಯ ನಿರ್ಮಾಣ ನಮ್ಮ ಸಂಕಲ್ಪ, ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಈ ಪುರಾತನ ಪವಿತ್ರ ದೇವಸ್ಥಾನ ಮತ್ತು ಪರಿವಾರ ದೇವರು ಮತ್ತು ದೈವಗಳನ್ನು ಆಗಮ ಶಾಸ್ತ್ರಕ್ಕೆ ಸರಿಯಾಗಿ ನಿರ್ಮಾಣ ಮಾಡಿಕೊಂಡು ಹೋಗಬೇಕು. ಹಾಗಾದಾಗ ನಾಡಿಗೆ ಬರುವ ಸಮಸ್ತ ದುರಿತಗಳು ದೂರವಾಗಿ ಪಾವನ ಕ್ಷೇತ್ರವಾಗಿ ಇಷ್ಟಾರ್ಥ ಸಿದ್ಧಿಸುವುದೆಂದು ತಿಳಿದು ಬಂತು. ಅದರಂತೆ ಪ್ರಖ್ಯಾತ ಶಿಲ್ಪಿಗಳಾದ ಶ್ರೀ ಮಹೇಶ ಮುನಿಯಂಗಳ ಇವರ ಮಾರ್ಗದರ್ಶನದಂತೆ ಮೂಲ ಶ್ರೀ ಶರಭೇಶ್ವರ ದೇವರ ಗರ್ಭಗುಡಿ, ತೀರ್ಥ ಮಂಟಪ, ಸುತ್ತು ಪೌಳಿ, ಧ್ವಜಸ್ತಂಭ, ಹನುಮಂತ ದೇವರ ಗುಡಿ, ಗಣಪತಿ ದೇವರ ಗುಡಿ, ಮಹಿಷಮರ್ಧಿನಿ ದೇವಿಯ ಗುಡಿ, ನಾಗದೇವರ ಬನ, ದೈವಸ್ಥಾನಗಳ ನೀಲ ನಕಾಶೆಯನ್ನು ತಯಾರಿಸಿದ್ದು ಸುಮಾರು 6 ರಿಂದ 7 ಕೋಟಿ ರೂಪಾಯಿಗಳು ಬೇಕಾಗಬಹುದೆಂದು ಅಂದಾಜು ಮಾಡಲಾಯಿತು. ಈ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಲು ಊರ, ಪರವೂರಿನ ಭಕ್ತಾದಿಗಳ ತನು-ಮನ-ಧನಗಳ ಸಹಕಾರವನ್ನು ಬಯಸುವ, ಜೀರ್ಣೋಧ್ಧಾರ ಸಮಿತಿ,

ಶ್ರೀ ಶರಭೇಶ್ವರ ದೇವಸ್ಥಾನ ಸರಪಾಡಿ